ಚಿದ್ದಣ ಚೋಳ ಮಹಾರಾಜ -
ತೆಲುಗು ಚೋಳ ವಂಶದ ಒಂದು ಶಾಖೆಗೆ ಸೇರಿದ ಅರಸ. ಕಲ್ಯಾಣ ಚಾಳುಕ್ಯ ಇಮ್ಮಡಿ ಸೋಮೇಶ್ವರನ ಸಾಮಂತ. 1073ರಲ್ಲಿ ಕನ್ನೆ 300, ಪೆಡೆಕಲ್-800, ನಳವಾಡಿ-500, ಅಯಜೆ-500 ಪ್ರಾಂತ್ಯಗಳನ್ನು ಆಳುತ್ತಿದ್ದನೆಂದು ಶಾಸನಗಳಿಂದ ತಿಳಿದಿದೆ. ತೆಲುಗು ಚೋಳ ವಂಶಸ್ಥರು ಸಾಧಾರಣವಾಗಿ ಉಪಯೋಗಿಸುತ್ತಿದ್ದ ಚರಣಸರೋರುಹವಿಹಿತ ವಿಲೋಚನ ತ್ರಿಳೋಚನಪ್ರಮುಖಾಖಿಳಪೃಥ್ವೀಸ್ವರ ಕಾರಿತಕಾವೇರೀ ತಿಲ್ ಕರಿಕಾಲುಕುಲರತ್ನಪ್ರದೀಪ ಕುಮಾರಾಂಕುಸ ಕಾಂಚೀಪುರತ್ರಿಪುರ ಸಂಹರಣ ಮಹೇಶ್ವರ ಎಂಬ ಪ್ರಶಸ್ತಿಯನ್ನು ಈತನ ಶಾಸನಗಳಲ್ಲೂ ಬಳಸಲಾಗಿದೆ. ಇಂಥದೇ ಪ್ರಶಸ್ತಿಯನ್ನು ಪಡೆದಿದ್ದ ಇರುಗಣ ಚೋಳನೆಂಬೊಬ್ಬ ಈತನಿಗೂ ಮೊದಲು 1 ನೆಯ ಸೋಮೇಶ್ವರನ (1044-1068) ಸಾಮಂತವಾಗಿ ಆಳುತ್ತಿದ್ದುದು ಆಂಧ್ರ ಪ್ರದೇಶದ ಮಹಬೂಬ್‍ನಗರ ಜಿಲ್ಲೆಯ ಸುತ್ತಲ ಗ್ರಾಮಗಳ ಶಾಸನಗಳಿಂದ ತಿಳಿದಿದೆ. ಇವನು ಚಿದ್ದಣ ಚೋಳನಿಗೆ ಹಿರಿಯನಾಗಿರಬಹುದು.

	ಚಿದ್ದಣ ತನ್ನ ಅರಸನಾದ ಸೋಮೇಶ್ವರನಿಗೆ ಅತ್ಯಂತ ವಿಧೇಯನಾಗಿದ್ದ. ಸೋಮೇಶ್ವರನಿಗೂ ವಿಕ್ರಮಾದಿತ್ಯನಿಗೂ ನಡುವೆ ದ್ವೇಷ ತಲೆದೋರಿದಾಗ ಈತ ಸೋಮೇಶ್ವರನ ಸಾಮಂತನಾಗಿಯೇ ಉಳಿದನಲ್ಲದೆ, ಪರಿಸ್ಥಿತಿಯ ದುರ್ಲಾಭ ಪಡೆಯಲು ದಂಗೆ ಎದ್ದಿದ್ದ ಸೇಉಣ ವಂಶದ ಸೇಗುಣವನ್ನು (ಇಮ್ಮಡಿ ಸೇಉಣ ಚಂದ್ರ ) ಸೋಲಿಸಿ ಸೆರೆಹಿಡಿದ. ಇದಕ್ಕಾಗಿ ಉತ್ತರ ದಿಗ್ವಿಜಯ ಕೈಗೊಂಡಿದ್ದ ಈತ ಹಿಂದಿರುಗುವಾಗ ಎಳರಾಮತೀರ್ಥದ ಲಕ್ಷ್ಮಣೇಶ್ವರ ದೇವರಿಗೆ ದತ್ತಿಗಳನ್ನು ಬಿಟ್ಟನೆಂದು ಬೀಪಲ್ಲಿ ಶಾಸನ ತಿಳಿಸುತ್ತದೆ. ವಿಕ್ರಮಾದಿತ್ಯ ಆಳತೊಡಗಿದ ಮೇಲೆ ಚಿದ್ದಣ ಬಹುಶಃ ತನ್ನ ಅಧಿಕಾರವನ್ನು ಕಳೆದುಕೊಂಡ.       (ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ